Kannada

ದೇವೇಗೌಡರು ಪುತ್ರ ಪ್ರೇಮವನ್ನು ತೊರೆದರೆ ಜೆಡಿಎಸ್ ಉಳಿವು ಸಾಧ್ಯ

Written by : TNM

ಮುನೀರ್ ಕಾಟಿಪಳ್ಳ

ವಿಧಾನ ಸಭೆಯಿಂದ ವಿಧಾನ ಪರಿಷತ್, ರಾಜ್ಯ ಸಭಾ ಸ್ಥಾನಗಳಿಗೆ ನಡೆದ ಚುನಾವಣೆ ಕರ್ನಾಟಕ ರಾಜಕಾರಣದ ಅಂಗಳದಿಂದ ಜನತಾ ಪರವಾದದ ನಿರ್ಗಮನವನ್ನು ಖಚಿತಪಡಿಸಿದೆ. ಕಳೆದ ಮೂರುವರೆ ದಶಕಗಳ ಕಾಲ ರಾಜ್ಯ ರಾಜಕಾರಣದಲ್ಲಿ ನಿರ್ಣಾಯಕ ಶಕ್ತಿಯಾಗಿ ಮೆರೆದ, ದೆಹಲಿ ರಾಜಕಾರಣವನ್ನು ಕೆಲವು ಬಾರಿ ನಿಯಂತ್ರಿಸಿದ್ದ ಜನತಾ ಪರಿವಾರ ಈ ಮೂಲಕ ತನ್ನ ಪಯಣದ ಕೊನೆಯ ಹಂತವನ್ನು ತಲುಪಿದೆ.

ಇಂಡಿಯಾದ ರಾಜಕಾರಣದಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬಂದ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳೂ ಮೂರನೇ ಪರ್ಯಾಯದ ಆಯ್ಕೆಯನ್ನು ಇಲ್ಲವಾಗಿಸಲು ಪ್ರಜ್ಞಾಪೂರ್ವಕವಾಗಿ ಪ್ರಯತಿಸುತ್ತಾ ಬಂದಿವೆ. ಅದರಂತೆ ಎಡಪಕ್ಷಗಳು, ಜಾತ್ಯತೀತ ತಳಹದಿಯ ಪ್ರಾದೇಶಿಕ ಪಕ್ಷಗಳನ್ನು ಗುರಿಯಾಗಿಸಿ ತಂತ್ರ ಹಣೆದಿವೆ. ಕೆಲವೆಡೆ ಯಶಸ್ಸನ್ನೂ ಕಂಡಿವೆ. (ಉದಾಹರಣೆಗೆ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಮುಂತಾದ ರಾಜ್ಯಗಳು) ಪ್ರಾದೇಶಿಕವಾಗಿ ಬೇರುಗಳನ್ನು ಹೊಂದಿರುವ, ಸ್ಥಳೀಯ ಭೂಮಾಲಿಕ ವರ್ಗಗಳನ್ನು ಪ್ರತಿನಿಧಿಸುವ (ಎಡಪಕ್ಷಗಳನ್ನು ಬಿಟ್ಟು) ಮೂರನೇ ಪರ್ಯಾಯದ ಪಕ್ಷಗಳು ಇಂಡಿಯಾದ ದೊಡ್ಡ ಬಂದವಾಳಶಾಹಿಗಳ ಪ್ರಾತಿನಿಧಿಕ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ವರ್ಗ ಹಿತಾಸಕ್ತಿಗೆ ಆಗಾಗ್ಗೆ ಸಣ್ಣಪುಟ್ಟ ಅಡಚಣೆಗಳನ್ನು ಉಂಟುಮಾಡುತ್ತವೆ. ಬಹುತೇಕವಾಗಿ ಕಾಂಗ್ರೆಸ್, ಬಿಜೆಪಿಗಳೊಂದಿಗೆ ಸಂದರ್ಭಾನುಸಾರ ಈ ಪಕ್ಷಗಳು ಸಹಬಾಳ್ವೆ ನಡೆಸಿದರೂ, ತಮ್ಮ ಸ್ಥಳೀಯ ರಾಜಕೀಯ ಹಿತಾಸಕ್ತಿಗಳ ಪ್ರಶ್ನೆ ಬಂದಾಗ, ನಿರ್ಣಾಯಕ ಸಂದರ್ಭಗಳಲ್ಲಿ ತಿರುಗಿ ಬೀಳುವ ಪ್ರಾದೇಶಿಕ ಪಕ್ಷಗಳು ಅಸ್ತಿತ್ವ ಕಳೆದುಕೊಂಡಷ್ಟು ತಮ್ಮ ದಾರಿ ಸಲೀಸು ಎಂಬುದು ಇಂಡಿಯಾದ ದೊಡ್ಡ ಬಂಡವಾಳಶಾಹಿಗಳು ಮತ್ತು ಅವರ ಪ್ರಾತಿನಿಧಿಕ ಪಕ್ಷಗಳ ನಿಲುವು.

ಈ ಯೋಜನೆಯ ಭಾಗದಂತೆ ಈಗ ಮೂರನೇ ಪರ್ಯಾಯದ ಆಯ್ಕೆಯನ್ನು ಇಲ್ಲವಾಗಿಸುವ ಕಾರ್ಯ ಕರ್ನಾಟಕದಲ್ಲಿ ನಡೆಯತೊಡಗಿದೆ. ಇಂದಿರಾ ಗಾಂಧಿಯ ಸರ್ವಾಧಿಕಾರದ ಕಾಲಘಟ್ಟದಲ್ಲಿ ಅರಸು ಯುಗಾಂತ್ಯಗೊಂಡು ಕರ್ನಾಟಕದಲ್ಲಿ ಗುಂಡೂರಾವ್ ದುರಾಡಳಿತ, ಪೊಲೀಸ್ ರಾಜ್ ಎದುರಾಗಿ ಹುಟ್ಟಿಕೊಂಡ ಜನಚಳುವಳಿ, ಸಾಂಸ್ಕೃತಿಕ, ಸಾಮಾಜಿಕ ಬಂಡಾಯವನ್ನು ನಗದೀಕರಿಸಿಕೊಂಡದ್ದು ಕರ್ನಾಟಕದ ಜನತಾ ಪಕ್ಷ.

ಕಾಂಗ್ರೆಸ್‌ನಿಂದ ಹೊರಬಿದ್ದು ಕ್ರಾಂತಿರಂಗ ರಚಿಸಿದ್ದ ಬಂಗಾರಪ್ಪ, ಜನತಾ ಪರಿವಾರದ ದೇವೇಗೌಡ, ಬೊಮ್ಮಾಯಿ, ಪಟೇಲ್, ರಾಮಕೃಷ್ಣ ಹೆಗಡೆ ಮುಂದಾಳತ್ವದ ಜನತಾಪಕ್ಷ ೧೯೮೩ರ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸೋಲಿಸಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಏರಿತ್ತು. ಅಂದು ಎಡಪಕ್ಷಗಳು ಏಳುಸ್ಥಾನಗಳನ್ನು ಗಳಿಸಿದ್ದರೆ, ಬಿಜೆಪಿ ಬೆರಳೆಣಿಕೆಯ ಸ್ಥಾನ ಗಳಿಸಲೂ ಪರದಾಡಿತ್ತು. ಅಲ್ಲಿಂದ ಮುಂದಕ್ಕೆ ಕರ್ನಾಟಕದ ರಾಜಕಾರಣದಲ್ಲಿ ಜನತಾ ಪರಿವಾರದ್ದೇ ಮೇಲುಗೈ. ಮುಂದಕ್ಕೆ ಜನತಾ ಪಕ್ಷ ಜನತಾದಳವಾದದ್ದು, ಆ ನಂತರ ಸಂಯುಕ್ತ ಜನತಾದಳ ಮತ್ತು ಜಾತ್ಯಾತೀತ ಜನತಾದಳವಾದದ್ದು, ಒಡಕಿನ ಮೇಲೆ ಒಡಕನ್ನು ಕಂಡದ್ದು ಈಗ ಇತಿಹಾಸ.

ಕಚ್ಚಾಟ, ಒಡಕು, ಭಿನ್ನಮತ ಅಧಿಕಾರದ ಹಪಾಹಪಿ ಜನತಾದಳದ ವಿಘಟನೆಗೆ ಕಾರಣವಾದರೂ ಜನತೆ ಮಾತ್ರ ಈ ಪಕ್ಷದ ಮೇಲೆ ನಿರೀಕ್ಷೆಯನ್ನು ಕಳೆದುಕೊಂಡಿರಲಿಲ್ಲ. ಕರ್ನಾಟಕದಲ್ಲಿ ಈ ಪಕ್ಷಕ್ಕಿದ್ದ ಜನತೆಯ ಬಲದಿಂದಲೇ ರಾಮಕೃಷ್ಣ ಹೆಗಡೆ, ದೇವೇಗೌಡ ರಾಷ್ಟ್ರರಾಜಕಾರಣದಲ್ಲೂ ಪ್ರಮುಖ ಪಾತ್ರ ವಹಿಸುವಂತಾಗಿತ್ತು. ಇದೇ ಸಂದರ್ಭ ಕರಾವಳಿ ಭಾಗದಲ್ಲಿ ಕೋಮುವಾದ, ಉತ್ತರ ಕರ್ನಾಟಕ, ಹೈದರಬಾದ್ ಕರ್ನಾಟಕ ಪ್ರಾಂತ್ಯದಲ್ಲಿ ಜಾತಿವಾದದ ಕಾರ್ಡ್ ಬಳಸಿ ಬಿಜೆಪಿ ಬೆಳೆಯತೊಡಗಿತ್ತು. ಜನತಾದಳದೊಳಗಡೆ ನಾಯಕರ ಮಧ್ಯೆಯ ಒಡಕು, ಅಪನಂಬಿಕೆಗಳು ಬಿಜೆಪಿಯ ಬೆಳವಣಿಗೆಗೆ ಸಹಕಾರಿಯಾಯಿತು. ಬಹಳ ಮುಖ್ಯವಾಗಿ ೧೯೯೬ರಲ್ಲಿ ದೇವೇಗೌಡ ಪ್ರಧಾನಿಯಾದ ಸಂದರ್ಭ ರಾಮಕೃಷ್ಣ ಹೆಗಡೆ ಜನತಾದಳದಿಂದ ಹೊರನಡೆದು ಕರ್ನಾಟಕ ನವನಿರ್ಮಾಣ ರಂಗ ರಚಿಸಿದ್ದು, ಮುಂದಿನ ಚುನಾವಣೆಯಲ್ಲಿ ಜನತಾದಳದಿಂದ ಸಿಡಿದು ಜೆಡಿ(ಯು) ಜೊತೆ ಸೇರಿ ಕರ್ನಾಟಕದಲ್ಲಿ ಬಿಜೆಪಿಯೊಂದಿಗೆ ಚುನಾವಣಾ ಮೈತ್ರಿ ಸಾಧಿಸಿದ್ದು ಕರ್ನಾಟಕದ ಮಟ್ಟಿಗೆ ಜನತಾ ಪರಿವಾರದ ಅವನತಿಯ, ಬಿಜೆಪಿ ಬೆಳವಣಿಗೆಯ ಮಹತ್ವದ ಹಂತ.

ಆನಂತರದ ದಿನಗಳಲ್ಲಿ ಬಿಜೆಪಿ ಪ್ರಧಾನ ವಿರೋಧ ಪಕ್ಷವಾಗಿ ವಿಧಾನಸಭೆಯಲ್ಲಿ ಖಾಯಂ ಸ್ಥಾನಗಳಿಸಿದರೂ, ಜನತಾ ಪರಿವಾರದ ಹೊಸ ರೂಪವಾಗಿದ್ದ ಜೆಡಿ(ಎಸ್) ಮುಂದೆ ಬಿಜೆಪಿಯನ್ನು ಜನತೆ ಕಾಂಗ್ರೆಸ್‌ಗೆ ಪರ್ಯಾಯ ಅಂತ ಪರಿಗಣಿಸುತ್ತಿರಲಿಲ್ಲ. ಅದರಲ್ಲೂ ಜೆಡಿ(ಎಸ್) ಕಾಂಗ್ರೆಸ್‌ನೊಂದಿಗೆ ಮೈತ್ರಿ ಸಾಧಿಸಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಟ್ಟಿದ್ದು ಬಿಜೆಪಿ ಮತ್ತು ಯಡಿಯೂರಪ್ಪ ಸಹಿತ ಹಲವು ಬಿಜೆಪಿ ನಾಯಕರನ್ನು ರಾಜಕೀಯ ಹತಾಶೆಗೆ ತಳ್ಳಿತ್ತು. ಈ ಹತಾಶೆ ಬಿಜೆಪಿ ವಿಭಜನೆಯ ಸಾಧ್ಯತೆಯ ವರೆಗೆ ಮುಂದುವರಿದಿತ್ತು. ಆದರೆ ಅದೇ ಸಂದರ್ಭದಲ್ಲಿ ಸಿದ್ಧರಾಮಯ್ಯ ಸಹಿತ ಜೆಡಿ(ಎಸ್)ನ ಪ್ರಮುಖ ನಾಯಕರು ಜೆಡಿ(ಎಸ್)ನಿಂದ ಹೊರನಡೆದದ್ದು. ಕುಮಾರ ಸ್ವಾಮಿ ಮತ್ತು ಗೆಳೆಯರು ಜನತಾದಳದಲ್ಲಿ ಪ್ರವರ್ಧಮಾನಕ್ಕೆ ಬಂದದ್ದು, ರೆಸಾರ್ಟ್ ರಾಜಕಾರಣವನ್ನು ಆರಂಭಿಸಿ ಬಿಜೆಪಿಯೊಂದಿಗೆ ಅಪವಿತ್ರ ಮೈತ್ರಿಯನ್ನು ಸಾಧಿಸಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದದ್ದು ಕರ್ನಾಟಕ ರಾಜಕಾರಣದ ಮುಂದಿನ ದಿನಗಳ ದಿಕ್ಕನ್ನು ನಿರ್ಧರಿಸಿದ ನಿರ್ಣಾಯಕ ಘಟನೆಗಳು.

ಈ ಬೆಳವಣಿಗೆಗಳು, ಕಮರಿದ್ದ ಬಿಜೆಪಿಯ ಭವಿಷ್ಯವನ್ನು ಗರಿಗೆದರಿಸಿತು. ಅದರಲ್ಲೂ ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರಿಸದ ಘಟನೆ ಜೆಡಿ(ಎಸ್) ಅಂತ್ಯಕ್ಕೆ ಮುನ್ನುಡಿ ಬರೆಯಿತು. ಅನಂತರ ದಿನಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಸೇರಿ ಜೆಡಿ(ಎಸ್) ಅಂತ್ಯಕ್ಕೆ ರಣತಂತ್ರ ರೂಪಿಸತೊಡಗಿದವು. ಅದರ ಅಂತಿಮ ಫಲಿತಾಂಶ ಮೊನ್ನೆ ನಡೆದ ವಿಧಾನ ಪರಿಷತ್, ರಾಜ್ಯ ಸಭಾ ಚುನಾವಣೆಯಲ್ಲಿ ವ್ಯಕ್ತಗೊಂಡಿದೆ.

ಈ ದೇಶದ ದೊಡ್ಡ ಬಂಡವಾಳಶಾಹಿಗಳ ಪ್ರಾತಿನಿಧಿಕ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಜಂಟಿ ಕಾರ್ಯಾಚರಣೆಯ ಮೂಲಕ ಜೆಡಿ(ಎಸ್) ಶವಪೆಟ್ಟಿಗೆಗೆ ಅಂತಿಮ ಮೊಳೆ ಹೊಡೆದಿದ್ದರೂ, ಜನತಾದಳದ ಅವನತಿಗೆ ಈ ಎರಡೂ ಪಕ್ಷಗಳಿಗಿಂತ ಜೆಡಿ(ಎಸ್)ನ ಸ್ವಯಂಕೃತ ಅಪರಾಧವೇ ಇಂದಿನ ಅದರ ಅವನತಿಗೆ ಕಾರಣ.

ಜನತಾ ಪರಿವಾರದ ಹುಟ್ಟು, ಬೆಳವಣಿಗೆ ಅದರ ಚಾರಿತ್ರಿಕ ಸಂದರ್ಭದ ಯಾವುದೇ ಅರಿವಿಲ್ಲದ ಕುಮಾರ ಸ್ವಾಮಿ, ಚೆಲುವರಾಯ ಸ್ವಾಮಿ, ಜಮೀರ್ ಅಹ್ಮದ್ ತರಹದ ಪಡ್ಡೆ ಹುಡುಗರ ಇಮೇಜಿನ ನಾಯಕರು ಮುನ್ನಲೆಗೆ ಬಂದಿದ್ದು, ಯಾವುದೇ ಸೈದ್ಧಾಂತಿಕತೆಯ ಅರಿವಿರದ ಹಣ, ಅಧಿಕಾರವಷ್ಟೇ ಮುಖ್ಯವಾಗಿದ್ದ ವ್ಯಾಪಾರಿ ಮನೋಭಾವ ಇವರಿಗಾಗಿ ಜನತಾದಳದ ಇತರ ನಾಯಕರನ್ನು ದೇವೇಗೌಡರು ಮೂಲೆಗುಂಪು ಮಾಡಿದ್ದು, ಪಕ್ಷದಿಂದ ಬಲವಂತವಾಗಿ ಹೊರನಡೆಯುವ ಸಂದರ್ಭ ಸೃಷ್ಟಿ ಮಾಡಿದ್ದು ಜೆಡಿ(ಎಸ್)ನ ಇಂದಿನ ಸರ್ವನಾಶದ ಸ್ಥಿತಿಗೆ ಕಾರಣ.

ಇದೇನೇ ಇದ್ದರೂ ಕರ್ನಾಟಕದಲ್ಲಿ ಈ ಸಂದರ್ಭದಲ್ಲೂ ಕಾಂಗ್ರೆಸ್, ಬಿಜೆಪಿಯ ನಡುವೆ ಮೂರನೇ ಪರ್‍ಯಾಯದ ಅವಕಾಶ ಮುಕ್ತವಾಗಿಯೇ ಇದೆ.

ಕಾಂಗ್ರೆಸ್ ಬಿಜೆಪಿಗಳು ಎಷ್ಟೇ ಪ್ರಯತ್ನಿಸಿದರೂ ಇಲ್ಲಿನ ಗ್ರಾಮೀಣ ಜನತೆ, ಜನತಾ ಪರಿವಾರದ ಕುರಿತು ಒಂದು ಅಭಿಮಾನವನ್ನು ಇನ್ನೂ ಹೊಂದಿದ್ದಾರೆ. ಅದನ್ನು ತೆಗೆದು ಹಾಕುವುದು ಅಷ್ಟು ಸುಲಭವಲ್ಲ. ಇಲ್ಲಿನ ಪ್ಯೂಡಲ್ ಜಾತಿಗಳಿಗೆ ಮಾತ್ರವಲ್ಲ ಇಲ್ಲಿನ ಮುಸ್ಲಿಮರಿಗೆ, ದಲಿತರಿಗೂ ಇನ್ನೊಂದು ಸೆಕ್ಯುಲರ್ ಪಕ್ಷ ಬೇಕೇಬೇಕು. ದೇವೇಗೌಡರು ಮನಸ್ಸು ಮಾಡಬೇಕಷ್ಟೇ. ಅದಕ್ಕಾಗಿ ಅವರು ಧೃತರಾಷ್ಟ್ರನಂತಹ ಪುತ್ರ ಪ್ರೇಮವನ್ನು ತೊರೆಯಬೇಕು. ಅದಕ್ಕೆ ದೇವೇಗೌಡರು ಸಿದ್ದರಿದ್ದಾರಾ ಎಂಬುದರ ಮೇಲೆ ಕರ್ನಾಟಕದ ಜನತಾ ಪರಿವಾರದ ಭವಿಷ್ಯ ನಿಂತಿದೆ.

(ಮುನೀರ್ ಕಾಟಿಪಳ್ಳ, ಡಿವೈಎಫ್ ಐ ರಾಜ್ಯಾಧ್ಯಕ್ಷ ಹಾಗೂ ರಾಜಕೀಯ ವಿಶ್ಲೇಷಕ)

Being KC Venugopal: Rahul Gandhi's trusted lieutenant

Opinion: Why the Congress manifesto has rattled corporate monopolies, RSS and BJP

‘Don’t drag Deve Gowda’s name into it’: Kumaraswamy on case against Prajwal Revanna

Delhi police summons Telangana Chief Minister Revanth Reddy

Mandate 2024, Ep 2: BJP’s ‘parivaarvaad’ paradox, and the dynasties holding its fort