ಜಾತಿ ಕೇಳದ ಮನೆ ಸಿಗಲೇ ಇಲ್ಲ: ನಾಗರಾಜ್ ಹೆತ್ತೂರು

ನೇರವಾಗೆ ನಾನು ಎಸ್- ಸಿ ಎಂದೆ. ಅವನ ಮುಖ ಸಣ್ಣಗಾಗಿತ್ತು
ಜಾತಿ ಕೇಳದ ಮನೆ ಸಿಗಲೇ ಇಲ್ಲ: ನಾಗರಾಜ್ ಹೆತ್ತೂರು
ಜಾತಿ ಕೇಳದ ಮನೆ ಸಿಗಲೇ ಇಲ್ಲ: ನಾಗರಾಜ್ ಹೆತ್ತೂರು
Written by:

ನಾಗರಾಜ್ ಹೆತ್ತೂರು

ಕಳೆದ 15 ದಿನದಿಂದ ಹಾಸನದ ಶಾಂತಿನಗರ, ಹೇಮಾವತಿ ನಗರದಲ್ಲಿ ಮನೆ ಹುಡುಕುತ್ತಿದ್ದೇನೆ.....

ಮಗಳ ಸ್ಕೂಲಿಗೆ ಹತ್ತಿರವಿದ್ದ ಒಂದು ಮನೆಯನ್ನು ನೆನ್ನೆ ನೋಡಿದೆ ಇಷ್ಟವಾಯಿತು. ನಾಳೆ ಬನ್ನಿ ಎಂದರು. ಇರಲಿ ಎಂದು ಹಾಸನದ ಎಬಿಸಿಯ ಜಿಲ್ಲಾಧ್ಯಕ್ಷರಾದ ಶಿವಲಿಂಗೇಗೌಡ ವಿಚಾರ ತಿಳಿಸಿದೆ. ಅವರು ಪೋನ್ ಮಾಡಿ ಮಾಲೀಕರೊಂದಿಗೆ ಮಾತನಾಡಿ `ನಾಗರಾಜ್ ನಮ್ಮ ಉಪಾಧ್ಯಕ್ಷರು ದಯಮಾಡಿ ಮನೆ ಕೊಡಿ' ಎಂದರು. ಓ ಸಾರ್ ನೀವು ಹೇಳಿದ ಮೇಲೆ ಮುಗೀತು ಕೊಡ್ತೀನಿ ನಾಳೆ ಬೆಳಗ್ಗೆಯೇ ಬನ್ನಿ ಎಂದರು.

ಸುಮಾರು 50 ಮನೆ ನೋಡಿ ಬೇಸತ್ತು ಹೋಗಿದ್ದ ನನಗೆ ಶಿವಲಿಂಗೇಗೌಡರು ಹೇಳಿದ ಮೇಲೆ ಕೊಟ್ಟೇ ಕೊಡುತ್ತಾರೆ ಎಂದು ಮನಸ್ಸಿಗೆ ಹೇಳಲಾಗದ ಸಂತೋಷ....

ಬೆಳಗ್ಗೆ ಎದ್ದವನೇ ಕಾರು ತೆಗೆದುಕೊಂಡು ಹೋಗಿ ಶಿವಲಿಂಗೇಗೌಡರ ಮನೆ ಮುಂದೆ ನಿಲ್ಲಿಸಿದೆ.

ನಿದ್ದೆಗಣ್ಣಲಿದ್ದವರನ್ನು ಎಬ್ಬಿಸಿಕೊಂಡು ಬನ್ನಿ ಸಾರ್ ಎಂದು ಕರೆದುಕೊಂಡು ಹೋದೆ.

ಹೇಗೂ ಗೌಡರು ನಮ್ಮೊಂದಿಗಿದ್ದಾರೆ ನಾವು ನೋಡಲು ಹೋಗುತ್ತಿರುವುದು ಗೌಡರಿಗೆ ಸೇರಿದ ಮನೆ. ಇವತ್ತಾದ್ರೂ ಮನೆ ಸಿಗಬಹುದು ಎಂಬ ಲೆಕ್ಕಾಚಾರ ನನ್ನದು...

ಮನೆ ನೋಡಾಯ್ತು.. ಎಲ್ಲಾ ಓಕೆ ಅಂದಾಯ್ತು. 

ಆಚೆ ಬಂದವರೇ ಅಡ್ವಾನ್ಸ್ ಕೊಡುತ್ತೇನೆ ಎಂದೆ....

"ಸಾರ್ ನೀವು ಯಾವ ಜಾತಿ..?'' ಶಿವಲಿಂಗೇಗೌಡರ ಮುಂದೆಯೇ ಆತ ನೇರವಾಗಿ ಕೇಳಿದ.

ಒಂದು ಕ್ಷಣ ನಾನು ಶಿವಲಿಂಗೇಗೌಡರ ಮುಖ ನೋಡಿದೆ.....

ಅವರೂ ನನ್ನ ಮುಖ ನೋಡಿದರು. 

ಸುಳ್ಳು ಹೇಳುವುದು ನನ್ನ ಜಾಯಮಾನವಲ್ಲ... ಯಾಕಂದ್ರೆ ನಾನು ಮಾಡುವುದು ಸೋಷಿಯಲ್ ಸರ್ವೀಸ್, ಆಗಾಗ ಟಿವಿಯಲ್ಲಿ ಪತ್ರಿಕೆಯಲ್ಲಿ ಬರುತ್ತಿರುತ್ತೇವೆ. ಇವತ್ತಲ್ಲ ನಾಳೆ ಗೊತ್ತಾಗುತ್ತೆ...

ನೇರವಾಗೆ ನಾನು ಎಸ್- ಸಿ ಎಂದೆ....

ಅವನ ಮುಖ ಸಣ್ಣಗಾಗಿತ್ತು...

ಸಾರ್ ಬೇಜಾರು ಮಾಡ್ಕೋಬೇಡಿ ಎಸ್ ಸಿ ಗೆ ಕೊಡಲ್ಲಾ ಎಂದರು.

ಯಾಕೆ ಎಂದೆ...?

ನಮ್ ಹೆಂಡ್ತಿಗೆ ಇಷ್ಟ ಇಲ್ಲ ಎಂದರು.

ಶಿವಲಿಂಗೇಗೌಡರು ಮೂಖರಾಗಿದ್ದರು. ನನಗೆ ಮಾತು ಹೊರಡಲಿಲ್ಲ..

ಆದ ಅವಮಾನ, ಒಂದು ಕಡೆ ಕೋಪ, ಅಸಹನೆ, ಎಲ್ಲವೂ ಒಮ್ಮೆಲೆ ಕಟ್ಟೆಯೊಡೆದಿತ್ತು.....

ಈ ಮಧ್ಯೆ ಶಿವಲಿಂಗೇಗೌಡರು ` ಎಲ್ಲಾ ನಮ್ಮವರೇ ಕೊಡಿ ಬಾಸು' ಎಂದರು

ಆತ ಖಡಕ್ ಆಗಿ ಹೇಳಿದ `ಸಾರಿ ಮಂಜೇಗೌಡ್ರೆ'
'ಯಾವ್ &^%$ . *** ನನ್ಮಗ ಜಾತಿ ಮಾಡಿದವ್ನು.....ಎಂದು ಮನಸಲ್ಲೇ ಬೈದುಕೊಂಡೆ... ಮನಸ್ಸಿಗೆ ಚಿತ್ರ ಹಿಂಸೆ...ಯಾರ್ಯಾರಿಗೋ ಹೋರಾಡ್ತಿವಿ ನಮ್ ಪಾಡೂ ಇದೆನಾ ಎಂದುಕೊಂಡೆ

ಇಂತಹ ``ದಲಿತರ ಬಾಡಿಗೆ ಮನೆ ಅಸ್ಪೃಶ್ಯತೆ ಆಚರಣೆ'' ಗೆ ಹಾಸನ ಕಸಾಪ ಜಿಲ್ಲಾಧ್ಯಕ್ಷರು ಸಾಕ್ಷಿಬೂತರಾಗಿದ್ದರು. ಅವರ ಬಾಯಿಂದ ಯಾವ ಮಾತು ಬರುತ್ತದೆ ಎಂದು ಕುತೂಹಲದಿಂದ ಕಾಯುತ್ತಿದ್ದೆ...

ಶಿವಲಿಂಗೇಗೌಡರು ಆಚೆ ಬಂದು... ``ಸಾರ್ ಹಿಂಗು ಇರ್ತಾರಾ ಜನಾ ಹೋಗ್ಲಿ ಬಿಡಿ ಬೇಜಾರ್ ಮಾಡ್ಕೋಬೇಡಿ ಇದಲ್ಲ ಅಂದ್ರೆ ಮತ್ತೊಂದು ಸಿಗುತ್ತೆ'' ಎಂದು ಸಾಂತ್ವಾನ ಹೇಳಿದರು

ತಕ್ಷಣ ಮಾವ ಸುಬ್ಬು ಹೊಲೆಯಾರ್ ಗೆ ಫೋನ್ ಮಾಡಿದೆ.

``ನಂಗೆ ಅವಮಾನವಾಗಿದೆ ಒಂದು ಅಟ್ರಾಸಿಟಿ ಕೊಡಲೇ ಇವ್ರಿಗೆಲ್ಲಾ ಪಾಠ ಕಲಿಸಬೇಕು'' ಎಂದು ಸಿಟ್ಟಿನಿಂದ ಹೇಳಿದೆ.

ಅವರು ಹೇಳಿದ್ದಿಷ್ಟು... ಮನಸ್ಸು ಪರಿವರ್ತನೆ ಆಗದೆ ಏನೂ ಮಾಡಲು ಸಾಧ್ಯವಿಲ್ಲ ಅವರಿಷ್ಟ ಅವರ ಮನೆ ಯಾರಿಗೆ ಬೇಕಾದ್ರೂ ಕೊಡಬಹುದು ಎಂದರು.

ನನಗೆ ನಾನೆ ಸಮಾಧಾನ ಪಟ್ಟುಕೊಂಡು ಸುಮ್ಮನಾದೆ........

ಇವರ ಮನಪರಿವರ್ತನೆ ಮಾಡುವವರು ಯಾರು...? ಅದಕ್ಕೆ ಕಾಲ ಯಾವಾಗ ಬರುತ್ತೆ...?

ಹತ್ತಿರ 50 ಕ್ಕೂ ಹೆಚ್ಚು ಮನೆ ನೋಡಿದೆ. ನಾನು ಕೇಳಿದಷ್ಟು ಅಡ್ವಾನ್ಸ್, ಬಾಡಿಗೆ ಕೊಡಲು ಸಿದ್ದವಿದ್ದೇನೆ... ಆದರೆ ಜಾತಿ ಕೇಳದ ಮನೆ ಸಿಗಲೇ ಇಲ್ಲ...  ನೋಡೋಣ...

(Nagaraj Hettur is a Hassan-based Dalit activist and writer. This post first appeared on his Facebook page on May 12, and has been reproduced with permission. It was also reproduced by Round Table India. The names of Shivlingegowda and the organization he represents have been changed.)

Related Stories

No stories found.
The News Minute
www.thenewsminute.com