ಅಧಿಕಾರಕ್ಕೆ ಏರಲು ಒಕ್ಕಲಿಗರ ಸಮುದಾಯವನ್ನು ಬಳಸಿಕೊಳ್ಳುವುದು ಅವರ ರಾಜಕೀಯ ಶೈಲಿ. ಗೆದ್ದ ನಂತರ ತಮ್ಮೂರಿನ ಕಡೆಗೆ ತಿರುಗಿಯೂ ನೋಡಲಿಲ್ಲ

 -
Kannada Politics Wednesday, April 27, 2016 - 14:33

ಆಕಾಶ್ ಮಲ್ನಾಡ್

ಇತ್ತೀಚೆಗೆ ಮೈಸೂರು ಜಿಲ್ಲೆಯ ಕೆ ಆರ್ ನಗರದಲ್ಲಿ ನಡೆದ ತಾಲೂಕು ಒಕ್ಕಲಿಗರ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ವೇದಿಕೆ ಹಂಚಿಕೊಂಡಿದ್ದಾರೆ. ಜತೆಗೆ, ಒಕ್ಕಲಿಗ ಸಮಾಜದ ಕುರಿತು ತಮ್ಮ ಕಕ್ಕುಲಾತಿಗೆ ಮಾತಿನ ಅಭಿವ್ಯಕ್ತಿ ನೀಡಿದ್ದಾರೆ.

ಹೆಚ್ಚು ಕಡಿಮೆ ಒಂದೇ ವಯೋಮಾನದ ಇಬ್ಬರು ನಾಯಕರು, ಹಿಂದೆ ಅಧಿಕಾರದಲ್ಲಿದ್ದಾಗ ಪರಸ್ಪರ ಜಿದ್ದಿಗೆ ಬಿದ್ದವರಂತೆ ಪರಸ್ಪರ ಕತ್ತಿ ಮಸೆಯುತ್ತಿದ್ದವರು. ಎಸ್. ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ದೇವೇಗೌಡರು ಸರಣಿ 'ಪ್ರೇಮ ಪತ್ರ'ಗಳನ್ನು ಬರೆಯುವ ಮೂಲಕ ಆಡಳಿತಕ್ಕೆ ಬಿಸಿ ಮುಟ್ಟಿಸುತ್ತ ಬಂದಿದ್ದನ್ನು ರಾಜ್ಯ ಜನ ಮರೆಯಲು ಸಾಧ್ಯವಿಲ್ಲ. ರಾಜ್ಯದಲ್ಲಿ 20-20 ಸರಕಾರವನ್ನು ಅಧಿಕಾರಕ್ಕೆ ತರುವ ದಿನಗಳಲ್ಲಿ ಎಸ್. ಎಂ. ಕೃಷ್ಣ ಮುಖ್ಯಮಂತ್ರಿಯಾಗುವ ಇರಾದೆಯನ್ನು ವ್ಯಕ್ತಪಡಿಸಿದ್ದರು. ಇದನ್ನು ದೇವೇಗೌಡರ ಬಳಿಯೂ ಕೋರಿಕೆ ರೂಪದಲ್ಲಿ ಮುಂದಿಟ್ಟಿದ್ದರು. ಆದರೆ, ದೇವೇಗೌಡರ ಆಶೀರ್ವಾದ ಸಿಕ್ಕಿದ್ದು ಮಾತ್ರ ಧರಂ ಸಿಂಗ್ ಅವರಿಗೆ. ಇದನ್ನು ಮುಂದೊಂದು ದಿನ ಗೌಡರು ಬಹಿರಂಗ ಪಡಿಸುವ ಮೂಲಕ ಎಸ್ಎಂಕೆ ಅವರಿಗೆ ಮುಖಭಂಗವನ್ನೂ ಮಾಡಿದ್ದರು. 

ಇತ್ತ ಎಸ್ಎಂಕೆ ಅಧಿಕಾರದಲ್ಲಿ ಇದ್ದಷ್ಟು ದಿನ ದೇವೇಗೌಡರಿಗೆ ಲಾಭಗಳೇನು ಆಗಿರಲಿಲ್ಲ. ಅವರೂ ಕೂಡ ಗೌಡರಿಗೆ ಆಡಳಿತಾತ್ಮಕ ಟಾಂಗ್ ಕೊಡುತ್ತಲೇ ಬಂದವರು. ಹೀಗಿರುವಾಗ, ಇಳೀ ವಯಸ್ಸಿನಲ್ಲಿ ಇಬ್ಬರು ನಾಯಕರು ಪುರಾತನ ಸ್ನೇಹಿತರಂತೆ ಒಬ್ಬರನ್ನೊಬ್ಬರು ಅಪ್ಪಿಕೊಂಡಿರುವುದು ನೋಡಿದರೆ, ರಾಜಕೀಯ ತಂತ್ರಗಾರಿಕೆಯ ಮುಂದುವರಿದ ಭಾಗವಿದು ಎಂದು ಜನರಿಗೆ ಅನ್ನಿಸದೇ ಇರದು. 

ಒಕ್ಕಲಿಗರಿಗೆ ಕೊಡುಗೆ ಏನು?: 

ಇನ್ನು, ಉಬಯ ನಾಯಕರು ಬೆಳೆದಿದ್ದು, ಅಧಿಕಾರಗಳನ್ನು ಅನುಭವಿಸಿದ್ದರ ಹಿಂದೆ ಬಳಕೆಯಾಗಿದ್ದು ಒಕ್ಕಲಿಗ ಎಂಬ ಟ್ರಂಪ್ ಕಾರ್ಡ್. ಆದರೆ, ಇವರು ಅಧಿಕಾರದಲ್ಲಿದ್ದ ದಿನಗಳಲ್ಲಿ ಒಕ್ಕಲಿಗರಿಗೆ ಸಿಕ್ಕಿದ್ದೇನು? ಎಂಬ ಕುರಿತು ಅವರಿವತ್ತು ಆತ್ಮಾವಲೋಕನ ಮಾಡಿಕೊಳ್ಳುವಂತಹ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. 

ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮಿ ಬೆಂಗಳೂರಿನಲ್ಲಿ ನಡೆಸಿದ ಪಾದಯಾತ್ರೆಯ ಫಲವಾಗಿಯೇ ಅವತ್ತು ದೇವೇಗೌಡರು ಮುಖ್ಯಮಂತ್ರಿಯಾದರು ಎಂಬ ರಾಜಕೀಯ ವಿಶ್ಲೇಷಣೆಗಳಿವೆ. ಆದರೆ, ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ದೇವೇಗೌಡರು ಮಠದ ವಿರುದ್ಧ ಬಹಿರಂಗ ಸಭೆಯಲ್ಲಿ ತೊಡೆ ತಟ್ಟಿದ್ದರು. ಮಠಕ್ಕೆ ಪರ್ಯಾಯವೊಂದನ್ನು ಹುಟ್ಟು ಹಾಕಿದರು.

"ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ ಭೇಟಿ ಮಾಡಲು ಹೋದ ಸಮಯದಲ್ಲಿ ಒಕ್ಕಲಿಗ ನಾಯಕರಿಗೆ ನಾನು ಸಮುದಾಯ ನಾಯಕ ಅಲ್ಲ; ಈ ದೇಶದ ಪ್ರಧಾನಿ,'' ಎಂದು ಹೇಳಿ ಕಳಿಸಿದ್ದರು ಎಂದು ಒಕ್ಕಲಿಗರ ಸಂಘದ ಪ್ರತಿನಿಧಿಯೊಬ್ಬರು ನೆನಪು ಮಾಡಿಕೊಳ್ಳುತ್ತಾರೆ. "ಅದೇ ವೇಳೆಯಲ್ಲಿ, ದೇವೇಗೌಡರು ತಮ್ಮೂರಿನ ಗ್ರಾಮ ಪಂಚಾಯ್ತಿಯ ರಾಜಕೀಯದಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದರು,'' ಎಂದವರು ಆರೋಪಿಸುತ್ತಾರೆ.

ದೇವೇಗೌಡರು ರಾಜಕೀಯವಾಗಿ ಮುಗಿಸಿದ ಒಕ್ಕಲಿಗರ ನಾಯಕರ ದೊಡ್ಡ ಪಟ್ಟಿಯನ್ನೂ ಅವರು ಮುಂದಿಡುತ್ತಾರೆ. "ಬಚ್ಚೇಗೌಡ, ಬೈರೇಗೌಡ, ನಾಗೇಗೌಡ, ಎಚ್. ಟಿ. ಕೃಷ್ಣಪ್ಪ, ಜಿ. ವಿಜಯ ಮತ್ತಿತರರ ರಾಜಕೀಯ ಅಧ್ಯಾಯದಲ್ಲಿ ದೇವೇಗೌಡದ ಪಾತ್ರವೇನು ಎಂಬುದನ್ನು ರಾಜ್ಯ ಜನ ಗಮನಿಸಿದ್ದಾರೆ,'' ಎಂದು ಅವರು ವಿವರಿಸುತ್ತಾರೆ.

ಇನ್ನು ಎಸ್. ಎಂ. ಕೃಷ್ಣ ಬಗೆಗೂ ಇಂತವೇ ಆರೋಪಗಳಿವೆ. ಅಧಿಕಾರಕ್ಕೆ ಏರಲು ಒಕ್ಕಲಿಗರ ಸಮುದಾಯವನ್ನು ಬಳಸಿಕೊಳ್ಳುವುದು ಅವರ ರಾಜಕೀಯ ಶೈಲಿ. ಗೆದ್ದ ನಂತರ ತಮ್ಮೂರಿನ ಕಡೆಗೆ ತಿರುಗಿಯೂ ನೋಡಲಿಲ್ಲ ಎಂಬುದು ಮಂಡ್ಯ ಭಾಗದಲ್ಲಿರುವ ಜನಪ್ರಿಯ ದೂರುಗಳು. ಸ್ಥಳೀಯವಾಗಿ ನಾನು ಒಕ್ಕಲಿಗ ಎಂದು ಹೇಳಿಕೊಂಡರೂ, ಅಧಿಕಾರ ಸಿಗುತ್ತಿದ್ದಂತೆ ಜಾತ್ಯಾತೀತ ಎಂಬ ಸೋಗು ಹಾಕಿದ ಹಲವರಲ್ಲಿ ಎಸ್. ಎಂ. ಕೃಷ್ಣ ಕೂಡ ಒಬ್ಬರು ಎಂಬುದು ಅವರ ಮೇಲಿರುವ ಆರೋಪಗಳು. 

ಮಂಡ್ಯದಲ್ಲೇನಾಯಿತು?: 

ಇಂತಹ ನಾಯಕರ ಸೋಗಲಾಡಿತನಗಳಿಂದಾಗಿಯೇ ಇವತ್ತು ಒಕ್ಕಲಿಗರ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಇಳಿಕೆ ಕಾಣುವಂತಾಗಿದೆ ಎಂಬುದು ರಾಜ್ಯ ಒಕ್ಕಲಿಗರ ಸಂಘದ ಹಿರಿಯ ಪದಾಧಿಕಾರಿಯೊಬ್ಬರ ಆರೋಪ. "ಮಂಡ್ಯದಲ್ಲಿ ಒಕ್ಕಲಿಗರ ಸ್ವಾಭಿಮಾನ ಸೇನೆ' ಹೆಸರಿನಲ್ಲಿ ಸಂಘ ಪರಿವಾರ ಸಮುದಾಯದ ಯುವಕರನ್ನು ಧರ್ಮದ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ. ಇದು ದೇವೇಗೌಡ ಹಾಗೂ ಎಸ್. ಎಂ. ಕೃಷ್ಣ ತರಹದ ನಾಯಕರ ಸೋಲಲ್ಲದೆ ಮತ್ತೇನು,'' ಎಂದವರು ಪ್ರಶ್ನಿಸುತ್ತಾರೆ. 

"ಏನೇ ಹೇಳಿ, ಅವರಿಬ್ಬರು ಈಗ ಆತ್ಮಾವಲೋಕನ ಮಾಡಿಕೊಂಡವರಂತೆ ಮಾತನಾಡುತ್ತಿದ್ದಾರೆ. ಆದರೆ, ಅದು ಅಧಿಕಾರ ಸಿಗುವವರೆಗೆ ಮಾತ್ರ ಎಂಬುದು ಎಲ್ಲರಿಗೂ ಗೊತ್ತಿದೆ. ಮೊದಲಿನ ಹಾಗೆ ಇಬ್ಬರನ್ನೂ ಒಕ್ಕಲಿಗರು ಪ್ರಶ್ನಾತೀತವಾಗಿ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಕೆ ಆರ್ ನಗರದಲ್ಲಿ ನಡೆದ ಸಮಾವೇಶದಲ್ಲಿ ಇಬ್ಬರು ಒಟ್ಟಾಗಿದ್ದು ಅಪರೂಪದ ಕಾರ್ಯಕ್ರಮ ಅಷ್ಟೆ. ಅದರ ಬಗ್ಗೆ ಯಾವುದೇ ಪ್ರೀತಿ ಆಗಲಿ, ಭರವಸೆಯಾಗಲೀ ನಮಗಿಲ್ಲ,'' ಎನ್ನುತ್ತಾರೆ ಅವರು.

(This article was originally published on the news website Samachara.com and has been reproduced here with permission.)

Topic tags,

Become a TNM Member for just Rs 999!
You can also support us with a one-time payment.